ಇಳಿಗೊಳವೆ-
ಒಂದು ಪಾತ್ರೆಯಲ್ಲಿರುವ ದ್ರವಪದಾರ್ಥವನ್ನು ಇನ್ನೊಂದು ಪಾತ್ರೆಗೆ ವರ್ಗಾಯಿಸಲು ಬಳಸುವ ಬಗ್ಗಿಸಿದ ಮತ್ತು ಅಸಮ ಬಾಹುಗಳಿರುವ ಕೊಳವೆ (ಸೈಫನ್). ಬಳಕೆಯಲ್ಲಿ ದ್ರವ ತುಂಬಿದ ಪಾತ್ರೆಯನ್ನು ಎತ್ತರಮಟ್ಟದಲ್ಲೂ ಖಾಲಿ ಪಾತ್ರೆಯನ್ನು ತಗ್ಗುಮಟ್ಟದಲ್ಲೂ ಇಟ್ಟು ಇಳಿಗೊಳವೆಯ ಗಿಡ್ಡ ಬಾಹುವನ್ನು ದ್ರವದೊಳಗೆ ಮುಳುಗಿಸುತ್ತಾರೆ; ಉದ್ದ ಬಾಹುವನ್ನು ಖಾಲಿ ಪಾತ್ರೆಯೊಳಗಿಟ್ಟು ದ್ರವ ಅಲ್ಲಿಗೆ ಬರುವಂತೆ ಹೀರುತ್ತಾರೆ. ಒಮ್ಮೆ ದ್ರವ ಹರಿಯಲು ಪ್ರಾರಂಭಿಸಿದರೆ ಮುಂದೆ ದ್ರವ ತುಂಬಿದ ಪಾತ್ರೆ ಖಾಲಿಯಾಗುವ ವರೆಗೆ ಅಥವಾ ಗಿಡ್ಡ ಬಾಹು ದ್ರವಸ್ಪರ್ಶ ಕಳೆದುಕೊಳ್ಳುವವರೆಗೆ (ಯಾವುದು ಮೊದಲಾಗುವುದೋ ಅಲ್ಲಿ ವರೆಗೆ) ಇಳಿಗೊಳವೆಯ ಮೂಲಕ ದ್ರವ ಹರಿದು ಖಾಲಿ ಪಾತ್ರೆಯನ್ನು ತುಂಬುತ್ತದೆ. ಸೀಮೆಎಣ್ಣೆ ಟಿನ್ನು ಖಾಲಿಮಾಡುವಾಗ, ಕೊಳಾಯಿಯಿಂದ ನೀರನ್ನು ಕೆಳಗಿನ ತೊಟ್ಟಿಗೆ ಹರಿಸಬೇಕಾದಾಗ ಒಂದು ರಬ್ಬರ್ ನಳಿಗೆಯ ಸಹಾಯದಿಂದ ಇಳಿಗೊಳವೆ ಕ್ರಿಯೆ ನಡೆಸುವುದು ವಾಡಿಕೆ.	
	
	ಇಳಿಗೊಡವೆಯ ತತ್ತ್ವವಿಷ್ಟು. ದ್ರವದ ತೆರೆದ ಮೇಲ್ಮೈ ಮೇಲೆ ವಾಯುಸಂಮರ್ದವಿದೆ. ಎಂದರೆ ದ್ರವಸಂಮರ್ದ ಮತ್ತು ವಾಯುಸಂಮರ್ದ ಪರಸ್ಪರ ಸಮಾನ ಮತ್ತು ವಿರುದ್ಧ ದಿಕ್ಕುಗಳಲ್ಲಿದ್ದು ದ್ರವ ಸಮತೋಲದಲ್ಲಿದೆ. ಒಂದು ನಿರ್ವಾತ ಕೊಳವೆಯ ಬಾಯಿಯನ್ನು ಕೊಳವೆಯಲ್ಲಿ ಮುಳುಗಿಸಿದಾಗ ಆ ಕೊಳವೆಯ ಒಳಗೆ ದ್ರವ ಒಂದು ನಿರ್ದಿಷ್ಟ ಎತ್ತರಕ್ಕೆ ಏರುವುದನ್ನು ನೋಡಬಹುದು. ಈ ಎತ್ತರ ದ್ರವದ ಸಾಂದ್ರತೆಯನ್ನು ಅವಲಂಬಿಸಿದೆಯೇ ವಿನಾ ಕೊಳವೆಯ ಆಕೃತಿ ಅಥವಾ ಅಡ್ಡಕೊಯ್ತವನ್ನಲ್ಲ. ದ್ರವ ಏರುವ ಈ ಎತ್ತರವನ್ನು ವಾಯುಭಾರ ಸೂಚಿಯಾಗಿ ಪರಿಗಣಿಸುತ್ತೇವೆ. ಒಂದೊಂದು ದ್ರವಕ್ಕೆ ಒಂದೊಂದು ಎತ್ತರದ ಸ್ಥಳದಲ್ಲಿ ಈ ಸೂಚಿ ಬೇರೆ ಬೇರೆಯಾಗಿರುವುದು. ಸಮುದ್ರಮಟ್ಟದಲ್ಲಿ ನೀರು ಏರುವ ಎತ್ತರ ಸುಮಾರು 33.8';ಪಾದರಸ ಏರುವ ಎತ್ತರ ಸುಮಾರು 30".

	ಈ ಎತ್ತರ ದ್ರವ ಸೂಚಿಸುವ ವಾಯುಭಾರ. ತಾತ್ವಿಕವಾಗಿ, ಇಳಿಗೊಳವೆಯ ಪ್ರಯೋಗದಲ್ಲಿ ಅದನ್ನು ನಿರ್ವಾತಗೊಳಿಸಿ ಗಿಡ್ಡ ಬಾಹುವಿನ ತೆರೆದ ಬಾಯಿಯನ್ನು ದ್ರವತುಂಬಿದ ಪಾತ್ರೆಯೊಳಗೆ ಮುಳುಗಿಸುತ್ತೇವೆ (A). ಆಗ ಸಹಜವಾಗಿ ಅದರೊಳಗೆ ಏರಿದ ದ್ರವ ಬಾಗನ್ನು (B) ಉತ್ತರಿಸಿ ಮುಂದಿನ ತಗ್ಗಿನ ಪ್ರದೇಶಕ್ಕೆ ಇಳಿಯುತ್ತದೆ. 

ಚಿತ್ರ-1

ಇಲ್ಲಿ AB(=x) ಎತ್ತರ (ಎಂದರೆ ದ್ರವ ಮಟ್ಟದಿಂದ ಇಳಿಗೊಳವೆಯ ಬಾಗುವಿನವರೆಗಿನ ಲಂಬ ಎತ್ತರ) ಆ ದ್ರವ ಸೂಚಿಸುವ ವಾಯುಭಾರ ಎತ್ತರಕ್ಕಿಂತ ಹೆಚ್ಚಾಗಿದ್ದರೆ ದ್ರವ ಬಾಗುವಿನವರೆಗೆ ಏರದೆ ಕೆಳಮಟ್ಟದಲ್ಲಿಯೇ ನಿಲ್ಲುವುದಿಲ್ಲ; ಆಗ ಇಳಿಗೊಳವೆ ಅಪ್ರಯೋಜಕವಾಗುತ್ತದೆ. ನೀರನ್ನು ಇಳಿಗೊಳವೆ ಮೂಲಕ ಸಾಗಿಸಬೇಕಾದಾಗ x ಬೆಲೆ ಸುಮಾರು 33' ಗಿಂತ ಕಡಿಮೆ ಇರಬೇಕು. ಇನ್ನೂ ಒಂದು ರೀತಿಯಲ್ಲಿ ಇಳಿಗೊಳವೆಯ ತತ್ತ್ವವನ್ನು ಪರಿಶೀಲಿಸಹುದು.

ಗಿಡ್ಡ ಬಾಹುವಿನೊಳಗಿನ ಸಂಮರ್ದ	= ವಾಯುಸಂಮರ್ದ (p)

x ಎತ್ತರದ ದ್ರವಸಂಮರ್ದ (p')

ಉದ್ದ ಬಾಹುವಿನೊಳಗಿನ ಸಂಮರ್ದ	= ವಾಯುಸಂಮರ್ದ (p)

(x+h) ಎತ್ತರ ದ್ರವಸಂಮರ್ದ (p' + p1)

ಆದ್ದರಿಂದ ಗಿಡ್ಡ ಬಾಹುವಿನೊಳಗಿನ ಸಂಮರ್ದ (p' - p1) ಉದ್ದ ಬಾಹುವಿನೊಳಗಿನ ಸಂಮರ್ದ (p - p' - p1) ಕ್ಕಿಂತ ಹೆಚ್ಚು ಎಂಬುದು ಸ್ಪಷ್ಟವಾಗಿದೆ. ಇದರ ಪರಿಣಾಮವಾಗಿ ಅಧಿಕ ಸಂಮರ್ದವಿರುವಡೆಯಿಂದ (A) ಕಡಿಮೆ ಸಂಮರ್ದವಿರುವೆಡೆಗೆ (D) ದ್ರವ ಹರಿಯುತ್ತದೆ.
(ಎನ್.ಎಚ್.ಜಿ.; ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ